ಕುಷ್ಟಗಿ
ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಮತ್ತು ಅದರ ಕೇಂದ್ರ. ತಾಲ್ಲೂಕಿನ ವಿಸ್ತೀರ್ಣ 1,386 ಚ.ಕಿ.ಮೀ. (536 ಚ.ಮೈ.) ಜನಸಂಖ್ಯೆ 2,39,259 (2001). ತಾಲ್ಲೂಕಿನಲ್ಲಿ ಒಟ್ಟು 164 ಹಳ್ಳಿಗಳಿವೆ ಆಡಳಿತದ ದೃಷ್ಟಿಯಿಂದ ತಾಲ್ಲೂಕನ್ನು ಲಿಂಗಸುಗೂರು ಉಪವಿಭಾಗಕ್ಕೆ (ಸಬ್ ಡಿವಿಷನ್) ಸೇರಿಸಲಾಗಿದೆ. ತಾಲ್ಲೂಕನ್ನು ಕುಷ್ಟಗಿ, ಹನುಮಸಾಗರ, ಗುಡಡೂರು ಮತ್ತು ತಾವರಗೇರಿ ಎಂಬ ನಾಲ್ಕು ಹೋಬಳಿಗಳಾಗಿ ವಿಭಾಗಿಸಲಾಗಿದೆ.      
     (ಎ.ಕೆ.)

	ತಾಲ್ಲೂಕಿನ ಬಹುಭಾಗ ಫ್ರೀ-ಕೇಂಬ್ರಿಯನ್ ಯುಗದಲ್ಲಿ ನಿರ್ಮಾಣಗೊಂಡ ಭೂಪದರಗಳಿಂದ ಕೂಡಿದೆ. ಇಲ್ಲಿಯ ಬಹುಪಾಲು ಶಿಲೆಗಳು ಧಾರವಾಡ ಶಿಲಾವರ್ಗಕ್ಕೆ ಸೇರಿದವು. ಕಲಾದಗಿ ಶ್ರೇಣಿಗೆ ಸೇರಿದ ಕೆಲವು ಶಿಲೆಗಳು ತಾಲ್ಲೂಕಿನ ವಾಯವ್ಯಕ್ಕೆ ಹರಡಿವೆ. ಇವುಗಳಲ್ಲಿ ಪೆಂಟೆಶಿಲೆ ಮತ್ತು ಮರಳುಶಿಲೆಯ ಪದರಗಳನ್ನು ಕಾಣಬಹುದು. ತಾಲ್ಲೂಕಿನ ಬಹುಪಾಲು ಭೂಮಿ ಕಪ್ಪು. ಕೆಲವು ಕಡೆ ಮರಳುಮಿಶ್ರಿತವಾದ, ಕೆಂಪು ಛಾಯೆಯ ಮಣ್ಣನ್ನು ಕಾಣಬಹುದು. ವರ್ಷವಿಡೀ ಸಾಮಾನ್ಯವಾಗಿ ಒಣ ಹವೆ ಇರುತ್ತದೆ. ವಾರ್ಷಿಕ ಮಳೆ ಸರಾಸರಿ 600 ಮಿಮೀ. ಸಾಮಾನ್ಯವಾಗಿ ಮಳೆ ಕಡಿಮೆಯಾದರೂ ಕೆಲವು ಸಾರಿ ತಾಲ್ಲೂಕು ಅತಿವೃಷ್ಟಿಗೆ ಈಡಾದ್ದೂ ಉಂಟು. 1944ರ ಸುಮಾರಿನಲ್ಲಿ ಆದ  ಅತಿವೃಷ್ಟಿಯಿಂದ ತಾಲ್ಲೂಕಿನ ಪ್ರಮುಖ ಆಹಾರ ಬೆಳೆಯಾದ ಜೋಳವೆಲ್ಲ ಹಾಳಾಗಿ ಬರ ಬಂದಿತ್ತು. ಇದನ್ನು ಇಂದಿಗೂ ಸಜ್ಜಿ ಬರ ಎಂದು ಅಲ್ಲಿಯವರು ನೆನೆಯುತ್ತಾರೆ. 1949ರಲ್ಲಿ ಮತ್ತೊಮ್ಮೆ ತಾಲ್ಲೂಕು ಭಾರಿ ಮಳೆಗೆ ಈಡಾಗಿತ್ತು. ಆಗ 20 ದಿವಸಗಳ ಕಾಲ ಸತತವಾಗಿ ಸಂಭವಿಸಿದ ವರ್ಷಧಾರೆಯಿಂದಾಗಿ ತಾಲ್ಲೂಕಿನ ಸಾಮಾನ್ಯ ಮನೆಗಳಲ್ಲಿ 70 ಕುಸಿದುವು.

	ತಾಲ್ಲೂಕಿನಲ್ಲಿರುವ ಕೃಷಿಯೋಗ್ಯ ಭೂಮಿ 2,73,647ಎಕರೆ. ಖುಷ್ಕಿ ಬೆಳೆಯೇ ಹೆಚ್ಚು. ಜೋಳ, ಸಜ್ಜೆ, ಗೋಧಿ, ಶೇಂಗ, ಹತ್ತಿ, ಎಳ್ಳು ಮತ್ತು ತೊಗರಿ ಇಲ್ಲಿಯ ಮುಖ್ಯ ಬೆಳೆಗಳು. 1962-63ರಲ್ಲಿ ತಾಲ್ಲೂಕಿನಲ್ಲಿ ನೀರಾವರಿ ಭೂಮಿಯೇ ಇರಲಿಲ್ಲ. ಆದರೆ ಗ್ರಾಮಾಂತರ ಅಭಿವೃದ್ಧಿ ಯೋಜನೆ ಜಾರಿಗೆ ಬಂದಾಗ ಇಲ್ಲಿ ಅನೇಕ ಬಾವಿಗಳನ್ನೂ ಕೆರೆಗಳನ್ನೂ ನಿರ್ಮಿಸಲಾಯಿತು. 1966-67ರ ಹೊತ್ತಿಗೆ 1,512 ಎಕರೆಗಳಷ್ಟು ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿತ್ತು. ತರಿ ಜಮೀನಿನಲ್ಲಿ ಸಾಮಾನ್ಯವಾಗಿ ಬತ್ತವನ್ನೂ ಕೆಲವೆಡೆ ಕಬ್ಬನ್ನೂ ಬೆಳೆಯುತ್ತಾರೆ. ತಾಲ್ಲೂಕಿನಲ್ಲಿರುವ ಕೆರೆಗಳು ನಾಲ್ಕು. ಇವು ಸುಮಾರು 921 ಎಕರೆ ಜಮೀನಿನ ನೀರಾವರಿಗೆ ಸಹಾಯಕವಾಗಿವೆ. ಕಡೂರು ಗ್ರಾಮ ಸಮೀಪದಲ್ಲಿ 36 ಲಕ್ಷ ರೂಪಾಯಿ ವೆಚ್ಚದಲ್ಲಿ ಚಿತ್ತವಡಗಿ ಕೆರೆಯನ್ನು ಕಟ್ಟಲಾಗಿದೆ. ಇದರ ನೀರು ಸಂಗ್ರಹಣ ಸಾಮಥ್ರ್ಯ ಸು. 20.1 ಕೋಟಿ ಘನ ಅಡಿ. ಈ ಕೆರೆಯಿಂದ ಬಿಜಾಪುರ ಜಿಲ್ಲೆಯ ಹನಗುಂದ ತಾಲ್ಲೂಕಿನ ಸ್ವಲ್ಪ ಜಮೀನಿಗೂ ನೀರೊದಗಿಸಲಾಗಿದೆ. ತಾಲ್ಲೂಕಿನಲ್ಲಿ ಬಹಳ ಕಡೆ ಲಕ್ಷ್ಮೀ ಹತ್ತಿ ಬೆಳೆಯುತ್ತಾರೆ. ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಅಷ್ಟಾಗಿಲ್ಲ. 1968ರ ಅಂಕಿಗಳ ಪ್ರಕಾರ ಇಡೀ ತಾಲ್ಲೂಕಿನಲ್ಲಿ ತಂದೇ ಒಂದು ಟ್ರ್ಯಾಕ್ಟರ್ ಬಳಕೆಯಲ್ಲಿತ್ತು. 1969ರ ವರೆಗೆ ಒಟ್ಟು 17 ಗ್ರಾಮಗಳಿಗೆ ವಿದ್ಯುಚ್ಛಕ್ತಿಯನ್ನು ಒದಗಿಸಲಾಗಿತ್ತು. 

	ಕೃಷಿಗೆ ಎರಡನೆಯದಾದ ಕಸಬೆಂದರೆ ನೇಯ್ಗೆ. ಹನಮಸಾಗರ, ತಾವರಗೇರಿ ಮತ್ತು ದೋತಿಹಾಳಗಳು ನೇಯ್ಗೆಯ ಕೇಂದ್ರಗಳು. ಇಲ್ಲಿ ತಯಾರಾಗುವ ಇಳಕಲ ಸೀರೆಗಳಿಗೆ ಗ್ರಾಮ ಪ್ರದೇಶದಲ್ಲಿ ಬೇಡಿಕೆಯುಂಟು. ರಾಜ್ಯದ ವಿಧಾನ ಸಭೆಯಲ್ಲಿ ಈ ತಾಲ್ಲೂಕಿಗೆ ಒಂದು ಸ್ಥಾನವಿದೆ.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	ತಾಲ್ಲೂಕಿನ ಕೇಂದ್ರವಾದ ಕುಷ್ಟಗಿ ಪಟ್ಟಣದ ಜನಸಂಖ್ಯೆ 21,180 (2001). ಇದೊಂದು ಮುಖ್ಯ ವ್ಯಾಪಾರಸ್ಥಳ. ತಾಲ್ಲೂಕಿನಲ್ಲಿ ಬೆಳೆದ ಹತ್ತಿ ಮತ್ತು ಶೇಂಗ ಹೊರ ಮಾರುಕಟ್ಟೆಗೆ ಹೋಗುವುದು ಇದರ ಮೂಲಕವೇ. ಇಲ್ಲೊಂದು ನಿಯಂತ್ರಿತ ಮಾರುಕಟ್ಟೆ ಸ್ಥಾಪಿತವಾಗಿದೆ. ಚಿತ್ರದುರ್ಗ- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯೂ ಒಂದು ರಾಜ್ಯ ಹೆದ್ದಾರಿಯೂ ಕುಷ್ಟಗಿ ಪಟ್ಟಣವನ್ನು ಹಾದು ಹೋಗುತ್ತವೆ. ಪಟ್ಟಣದ ನಾಲ್ಕೂ ದಿಕ್ಕುಗಳಲ್ಲಿರುವ ಗುಂಬಜ್óಗಳು ಈ ಪಟ್ಟಣದ ಗಡಿ ಗುರುತುಗಳು. ಕುಷ್ಟಗಿಯಲ್ಲಿ ಒಂದು ಪ್ರೌಢಶಾಲೆಯೂ ಸಾರ್ವಜನಿಕ ವಿದ್ಯಾರ್ಥಿನಿಲಯವೂ ಹಿಂದುಳಿದ ಪಂಗಡದ ಒಂದು ವಿದ್ಯಾರ್ಥಿನಿಲಯವೂ ಉಂಟು. ವ್ಯಾಸಪೂರ್ಣಿಮೆಯಂದು ನಡೆಯುವ ಅಡವಿರಾಯ ಜಾತ್ರೆ ಪಟ್ಟಣದ ಮುಖ್ಯ ವಾರ್ಷಿಕ ಆಕರ್ಷಣೆ.